ಹುಮಚ
	ಭಾರತದ ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಒಂದು ಗ್ರಾಮ ಮತ್ತು ಹೋಬಳಿ ಕೇಂದ್ರ. ತಾಲ್ಲೂಕಿನ ದಕ್ಷಿಣದ ಅಂಚಿನಲ್ಲಿ ಹೊಸನಗರಕ್ಕೆ ಆಗ್ನೇಯದಲ್ಲಿ 19 ಕಿಮೀ ದೂರದಲ್ಲಿದೆ. ಇದೊಂದು ಜೈನ ಯಾತ್ರಾಸ್ಥಳ. ಪಶ್ಚಿಮ ಘಟ್ಟಶ್ರೇಣಿಯ ಮಲೆನಾಡು ಪ್ರದೇಶಕ್ಕೆ ಸೇರಿದ್ದು ಇಲ್ಲಿಯ ಪ್ರಕೃತಿ ಸೌಂದರ್ಯ ನೋಡವಂತಹದು. ಇದರ ಬಳಿ 864.41 ಮೀ ಎತ್ತರವಿರುವ ಅಗಸ್ತ್ಯಪರ್ವತವಿದೆ. ಈ ಪುರಾತನ ಗ್ರಾಮ ಎಂಟನೆಯ ಶತಮಾನದಿಂದ ಹದಿನಾರನೆಯ ಶತಮಾನದವರೆಗೆ ಸಾಂತಳಿಗೆ1000 ನಾಡನ್ನು ಆಳುತ್ತಿದ್ದ ಸಾಂತರರ ರಾಜಧಾನಿಯಾಗಿತ್ತು. ಈ ರಾಜವಂಶದ ಮೂಲಪುರುಷ ಜಿನದತ್ತ. ಉತ್ತರದಿಂದ ಇಲ್ಲಿಗೆ ಬಂದು ಪದ್ಮಾವತಿಯ ವರಪ್ರಸಾದದಿಂದ ಇಲ್ಲಿ ನೆಲಸಿ ರಾಜ್ಯವನ್ನು ಕಟ್ಟಿದನೆಂದು ಪ್ರತೀತಿ. ಶಾಸನಗಳಲ್ಲಿ ಈ ಊರನ್ನು ಪೊಂಬುಚ್ಚ, ಪಟ್ಟಿಪೊಂಬುಚ್ರ್ಚ, ಹೊಂಬುಜ ಎಂದು ಕರೆದಿದೆ.

	ಸಾಂತರರು ಜೈನರಾಗಿದ್ದುದರಿಂದ ಇಲ್ಲಿ ಹಲವು ಜೈನಬಸದಿಗಳನ್ನು ನಿರ್ಮಿಸಿದರು. ಇಲ್ಲಿ ಒಂದು ಜೈನಮಠವೂ ಸ್ಥಾಪಿತವಾಗಿದೆ. ಇಲ್ಲಿಯ ಪ್ರಾಚೀನ ಬಸದಿ 850ರ ಕಾಲದ್ದಾಗಿದ್ದು ಅದಕ್ಕೆ ಪಾಲಿಯಕ್ಕನ ಬಸದಿ ಎಂಬ ಹೆಸರಿತ್ತು. ಆದರೆ ಈಗ ಆ ಬಸದಿಯಿಲ್ಲ. ಪಂಚಕೂಟ ಬಸದಿಯ ಆವರಣದಲ್ಲಿ ನಿರ್ಮಿತವಾಗಿರುವ ಪಾಶ್ರ್ವನಾಥ ಬಸದಿಯಲ್ಲಿ ಹಳೆಯ ಬಸದಿಯ ಅವಶೇಷಗಳನ್ನು ನೋಡಬಹುದು. ಈ ಊರಿನ ಗುಡ್ಡದ ತುದಿಯಲ್ಲಿ ಇನ್ನೊಂದು ಹಳೆಯ ಸಣ್ಣ ಬಸದಿಯಿದೆ. ಮಠದ ಆವರಣದಲ್ಲಿರುವ ಚಂದ್ರನಾಥ ಬಸದಿ ಹತ್ತನೆಯ ಶತಮಾನದಲ್ಲಿ ನಿರ್ಮಿತವಾದದ್ದು. ಇವೆಲ್ಲಕ್ಕಿಂತ ದೊಡ್ಡದೂ ಪ್ರಸಿದ್ಧವೂ ಆದುದು ಪಂಚಕೂಟ ಬಸದಿ. ಐದು ಗರ್ಭಗುಡಿಗಳಿದ್ದು ಒಂದೇ ನವರಂಗವಿರುವ ಈ ಬಸದಿಯನ್ನು ಚಟ್ಟಲದೇವಿ 1077ರಲ್ಲಿ ಕಟ್ಟಿಸಿದಳು. ಶಾಸನಗಳಲ್ಲಿ ಈ ಬಸದಿಯನ್ನು ಉವ್ರ್ವೀತಿಲಕ ಎಂದು ಕರೆದಿದೆ. ಇದರ ಮುಂದೆ ನಿಂತಿರುವ ಉನ್ನತವಾದ ಮಾನಸ್ತಂಭ ಸುಂದರವಾಗಿದೆ. ಈ ಊರಿನಲ್ಲಿ ಮೂವತ್ತಕ್ಕೂ ಹೆಚ್ಚು ಶಾಸನಗಳಿವೆ. ಇಲ್ಲಿಯ ಪದ್ಮಾವತಮ್ಮನ ರಥೋತ್ಸವ ಪ್ರಸಿದ್ಧವಾದದ್ದು.
												(ಎಮ್.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ